ಬಿಲ್ಕಿಸ್ ಬಾನು ಪ್ರಕರಣದ 11 ಅಪರಾಧಿಗಳಿಗೆ ಕ್ಷಮಾದಾನ ನೀಡಿರುವ ಕುರಿತ ದಾಖಲೆ ಒದಗಿಸುವಂತೆ ಸೂಚಿಸಿರುವ ಸುಪ್ರೀಂ ಆದೇಶವನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲಾಗುವುದು ಎಂದು ಗುಜರಾತ್ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ತಿಳಿಸಿವೆ. ಆದರೆ ಈ ನಡೆಯನ್ನು ನ್ಯಾ. ಕೆ.ಎಂ ಜೋಸೆಫ್ ಹಾಗೂ ನ್ಯಾ ಬಿ.ವಿ ನಾಗರತ್ನ ಅವರ ಪೀಠವು ತೀವ್ರವಾಗಿ ಖಂಡಿಸಿದೆ.
ಇದೊಂದು ಗಂಭೀರ ಪ್ರಕರಣ. ಓರ್ವ ಗರ್ಭಿಣಿ ಮೇಲೆ ಸಾಮೂಹಿಕ ಆತ್ಯಾಚಾರ ಎಸಗಿದ್ದಲ್ಲದೇ ಆಕೆಯ 7 ಜನ ಕುಟುಂಬಸ್ಥರನ್ನು ಹತ್ಯೆ ಮಾಡಲಾಗಿದೆ. ಇದನ್ನು ಸಾಮಾನ್ಯ ಕೊಲೆ ಪ್ರಕರಣ ರೀತಿ ಪರಿಗಣಿಸಬೇಡಿ. ಅದೊಂದು ಹತ್ಯಾಕಾಂಡ. ಇಂದು ಬಿಲ್ಕಿಸ್, ನಾಳೆ ನೀವು, ನಾವು ಅಥವಾ ಯಾರೇ ಆಗಿರಬಹುದು. ಈ ಅಪರಾಧಿಗಳಿಗೆ ಕ್ಷಮಾದಾನ ನೀಡಿರುವ ಕಾರಣಗಳ ಎಲ್ಲ ದಾಖಲೆಗಳನ್ನು ಒದಗಿಸದೇ ಇದ್ದಲ್ಲಿ ನಾವು ನಮ್ಮದೇ ಆದ ತೀರ್ಮಾನವನ್ನು ತೆಗೆದುಕೊಳ್ಳುತ್ತೇವೆ’ ಎಂದು ಸರ್ಕಾರಗಳನ್ನು ಎಚ್ಚರಿಸಿದೆ.













































