ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ(HD Kumaraswamy) ಅವರು, ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಿಂದ ಸೋಮವಾರ ಸಂಜೆ ಡಿಸ್ಚಾರ್ಜ್(Discharge) ಆಗಿದ್ದಾರೆ. ಹಾಗೂ ಜೆಪಿ ನಗರದ ತಮ್ಮ ನಿವಾಸದಲ್ಲಿ ವಿಶ್ರಾಂತಿ ಪಡೆದಿದ್ದಾರೆ. ಜ್ವರದಿಂದ ಬಳಲುತ್ತಿದ್ದ ಕುಮಾರಸ್ವಾಮಿ ಅವರು, ಶನಿವಾರ ರಾತ್ರಿ ವೈದ್ಯರ ಸಲಹೆಯ ಮೇರೆಗೆ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು.
ಆಸ್ಪತ್ರೆಯಲ್ಲಿದ್ದರೂ ಕುಮಾರಸ್ವಾಮಿ ಅವರು ಪ್ರಸ್ತುತ ವಿಧಾನಸಭಾ ಚುನಾವಣಾ ಪ್ರಚಾರದ ರೂಪುರೇಷೆ ಸಿದ್ಧಪಡಿಸಿದ್ದರು. ಚುನಾವಣಾ ಪ್ರಚಾರ ಮಾಡಬೇಕಾದ ಕ್ಷೇತ್ರಗಳ ರೂಟ್ ಮ್ಯಾಪ್ ಸಿದ್ಧಪಡಿಸಲಾಗಿದೆ. ಜ್ವರದಿಂದಾಗಿ ನಾಲ್ಕು ದಿನಗಳ ಕಾಲ ಪ್ರಚಾರ ಕೈಗೊಳ್ಳುವುದನ್ನು ರದ್ದುಪಡಿಸಲಾಗಿತ್ತು. ಸದ್ಯ ಕುಮಾರಸ್ವಾಮಿ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದ್ದು, ಮತ್ತೆ ಚುನಾವಣಾ ಪ್ರಚಾರಕ್ಕೆ ತೆರಳಲು ಸಜ್ಜಾಗಿದ್ದಾರೆ.













































