ಭಾರತದ ತಾರಾ ಬಾಕ್ಸಿಂಗ್ ಪಟುಗಳಾದ ನೀತು ಗಂಗಾಸ್ ಹಾಗೂ ಸ್ವೀಟಿ ಬೋರಾ ಮಹಿಳಾ ಬಾಕ್ಸಿಂಗ್ನಲ್ಲಿ ವಿಶ್ವ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ಇಲ್ಲಿ ನಡೆಯುತ್ತಿರುವ ಬಾಕ್ಸಿಂಗ್ ಕೂಟದ 48 ಕೆ.ಜಿ. ವಿಭಾಗದಲ್ಲಿ ಕಾಮನ್ವೆಲ್ತ್ ಗೇಮ್ಸ್ ಚಿನ್ನ ವಿಜೇತೆ ನೀತು ಮಂಗೋಲಿಯಾದ ಲುತ್ಸೈಖಾನ್ ವಿರುದ್ಧ 5-0 ಅಂತರದಲ್ಲಿ ಗೆದ್ದು ಚೊಚ್ಚಲ ವಿಶ್ವ ಚಾಂಪಿಯನ್ ಚಿನ್ನಕ್ಕೆ ಮುತ್ತಿಟ್ಟರು. ಆರಂಭದಲ್ಲೇ ಆಕ್ರಮಣಕಾರಿಯಾಗಿ ಪಂಚ್ಗಳ ಮೂಲಕ ಮೇಲುಗೈ ಸಾಧಿಸಿದ ನೀತು ಯಾವ ಕ್ಷಣದಲ್ಲೂ ಎದುರಾಳಿಗೆ ತಿರುಗೇಟು ನೀಡಲು ಅವಕಾಶ ನೀಡಲಿಲ್ಲ.
ಇದೇ ವೇಳೆ 81+ ಕೆ.ಜಿ. ವಿಭಾಗದಲ್ಲಿ ಸ್ವೀಟಿ 2018ರ ವಿಶ್ವ ಚಾಂಪಿಯನ್, ಚೀನಾದ ವ್ಯಾಂಗ್ ಲಿನಾ ವಿರುದ್ಧ 4-3 ಅಂತರದಲ್ಲಿ ಗೆದ್ದು ವಿಶ್ವ ಚಾಂಪಿಯನ್ ಎನಿಸಿಕೊಂಡರು. ಇದರೊಂದಿಗೆ ಲೈಟ್ ಹೇವಿವೈಟ್ ವಿಭಾಗದಲ್ಲಿ ಚಿನ್ನ ಗೆದ್ದ ಭಾರತದ ಮೊದಲ ಬಾಕ್ಸರ್ ಎಂಬ ಖ್ಯಾತಿಗೆ ಪಾತ್ರರಾದರು.ಹಾಲಿ ಚಾಂಪಿಯನ್ ನಿಖಾತ್ ಜರೀನ್(50 ಕೆ.ಜಿ.) ಹಾಗೂ ಒಲಿಂಪಿಕ್ಸ್ ಪದಕ ವಿಜೇತೆ ಲವ್ಲೀನಾ ಬೊರ್ಗೋಹೈನ್(75 ಕೆ.ಜಿ.) ಫೈನಲ್ನಲ್ಲಿ ಸೆಣಸಾಡಲಿದ್ದು, ಭಾರತಕ್ಕೆ ಮತ್ತೆರಡು ಚಿನ್ನ ತಂದುಕೊಡುವ ನಿರೀಕ್ಷೆಯಲ್ಲಿದ್ದಾರೆ.















































