ರಾಜಧಾನಿ ಬೆಂಗಳೂರಿನ ಬೈಕ್ ಸವಾರರಿಗೆ ನಗರ ಸಂಚಾರಿ ಪೊಲೀಸರು ಮಹತ್ವ ಸೂಚನೆ ನೀಡಿದ್ದಾರೆ. ಇನ್ಮುಂದೆ ಹೆಲ್ಮೆಟ್ ಧರಿಸದಿದ್ದಲ್ಲಿ 1,000 ರೂ. ದಂಡ ವಿಧಿಸಲಾಗುತ್ತದೆ ಎಂದು ಸಂಚಾರಿ ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ಬೆಂಗಳೂರು ನಗರ ಸಂಚಾರ ನಿಯಮ ಉಲ್ಲಂಘಿಸುವ ವಾಹನ ಸವಾರರ ಮೇಲೆ ನಿಗಾ ಇಡಲು ಹೈಡೆಪಿನೇಷನ್ ಕ್ಯಾಮೆರಾ ತಂತ್ರಕ್ಕೆ ಮೊರೆ ಹೋಗಿರುವ ಸಂಚಾರ ಪೊಲೀಸರು ಬೆಂಗಳೂರಿನಲ್ಲಿ ಹೆಲ್ಮೆಟ್ ನಿಯಮ ಉಲ್ಲಂಘಿಸಿದ ಬರೋಬ್ಬರಿ 10 ಲಕ್ಷ ಕೇಸ್ ಗಳನ್ನು ದಾಖಲಿಸಿದ್ದಾರೆ. ಬೈಕ್ ಸವಾರರು ಮುಂಬದಿ ಹಾಗೂ ಹಿಂಬದಿ ಸವಾರರು ಹೆಲ್ಮೆಟ್ ಧರಿಸದಿದ್ದಲ್ಲಿ ತಲಾ 500 ರೂ. ನಂತೆ 1 ಸಾವಿರ ರೂ. ದಂಡ ವಿಧಿಸಲಾಗುತ್ತಿದೆ. ಕಳೆದ ಮೂರು ತಿಂಗಳಲ್ಲಿ ಬೈಕ್ ಪ್ರಯಾಣದ ವೇಳೆ ಹೆಲ್ಮೆಟ್ ಧರಿಸದ ಸವಾರರ ವಿರುದ್ಧ 10 ಲಕ್ಷ ಕೇಸ್ ದಾಖಲಾಗಿವೆ. ನಗರ ಸಂಚಾರ ಪೊಲೀಸರ ಅಂಕಿ-ಅಂಶಗಳ ಪ್ರಕಾರ, ಈ ವರ್ಷ ಮಾರ್ಚ್ ಅಂತ್ಯಕ್ಕೆ ಹೆಲ್ಮೆಟ್ ಧರಿಸದ ಬೈಕ್ ಸವಾರರ ವಿರುದ್ಧ 8,84,166 ಹಾಗೂ ಹಿಂಬದಿ ಸವಾರರ ವಿರುದ್ಧ 1,66,000 ಕೇಸ್ ಗಳು ದಾಖಲಾಗಿವೆ. ಈ ಪೈಕಿ ಅರ್ಧ ಹೆಲ್ಮೆಟ್ ಧರಿಸಿದವರ ವಿರುದ್ಧವೂ ಪ್ರಕರಣ ದಾಖಲಾಗಿವೆ.
