ರಾಜ್ಯ ವಿಧಾನಸಭೆ ಚುನಾವಣೆಗೆ ಗುರುವಾರ (ಏ.13) ಅಧಿಸೂಚನೆ ಹೊರಬೀಳಲಿದ್ದು, ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ.
ಆಡಳಿತಾರೂಢ ಬಿಜೆಪಿ ಮರಳಿ ಅಧಿಕಾರಕ್ಕೆ ಬರುತ್ತಾ? ಪ್ರತಿಪಕ್ಷ ಕಾಂಗ್ರೆಸ್ಗೆ ಗದ್ದುಗೆ ಸಿಗುತ್ತಾ? ಜೆಡಿಎಸ್ಗೆ ನಿರೀಕ್ಷಿತ ಮಹತ್ವ ಸಿಗುತ್ತಾ? ಎಎಪಿ, ಕೆಆರ್ಎಸ್ ಮತ್ತಿತರ ಪಕ್ಷಗಳು ಖಾತೆ ತೆರೆಯಲಿವೆಯಾ? ಎಂಬಂತಹ ಹಲವು ಕುತೂಹಲದ ಪ್ರಶ್ನೆಗಳ ಮಧ್ಯೆ ಗುರುವಾರದಿಂದ ನಾಮಪತ್ರ ಭರಾಟೆ ಶುರುವಾಗಲಿದೆ. ಜತೆಗೆ, ಕೊನೆ ಕ್ಷಣದಲ್ಲೂ ಪಕ್ಷದಿಂದ ಪಕ್ಷಕ್ಕೆ ಜಿಗಿದಾಟ, ಬಂಡಾಯದ ಕಾವು ಕೂಡ ಹೆಚ್ಚುತ್ತಿದೆ.
ರಾಜ್ಯದ ಎಲ್ಲ224 ವಿಧಾನಸಭಾ ಕ್ಷೇತ್ರಗಳಿಗೆ ಮೇ 10ರಂದು ಒಂದೇ ಹಂತದಲ್ಲಿ ಚುನಾವಣೆ ನಡೆಯುತ್ತಿದ್ದು, ಒಟ್ಟು 5 ಕೋಟಿ 24 ಲಕ್ಷ ಮಂದಿ ಮತದಾನ ಮಾಡಲು ಅರ್ಹರಾಗಿದ್ದಾರೆ. ಗುರುವಾರದಿಂದ ನಾಮಪತ್ರ ಸಲ್ಲಿಕೆಗೆ ಒಂದು ವಾರ (ಏ.20 ರವರೆಗೆ) ಕಾಲಾವಕಾಶ ಸಿಗಲಿದೆ. ಉರಿಬಿಸಿಲಿನ ತೀವ್ರತೆ ಜತೆಗೆ ಚುನಾವಣೆ ಕಾವು ಹೆಚ್ಚುತ್ತಿದ್ದು, ಉಮೇದುವಾರಿಕೆ ಸಲ್ಲಿಕೆಯೊಂದಿಗೆ ಅಖಾಡ ಪೂರ್ಣ ಪ್ರಮಾನದಲ್ಲಿ ರಂಗೇರುತ್ತಿದೆ.














































