ಏಷ್ಯಾ ಕಪ್ ಟೂರ್ನಿಗೆ ಇದೇ ಮೊದಲ ಅರ್ಹತೆ ಗಿಟ್ಟಿಸುವ ಮೂಲಕ ನೇಪಾಳ ಕ್ರಿಕೆಟ್ ತಂಡ ಇತಿಹಾಸ ನಿರ್ಮಿಸಿದೆ. ಎಸಿಸಿ ಪುರುಷರ ಪ್ರೀಮಿಯರ್ ಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಬಲಿಷ್ಠ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ತಂಡವನ್ನು 7 ವಿಕೆಟ್ಗಳ ಅಂತರದಲ್ಲಿ ಬಗ್ಗುಬಡಿದ ನೇಪಾಳ ತಂಡ, ಇದೇ ವರ್ಷ ಆಗಸ್ಟ್-ಸೆಪ್ಟೆಂಬರ್ನಲ್ಲಿ ಪಾಕಿಸ್ತಾನದ ಆತಿಥ್ಯದಲ್ಲಿ ನಡೆಯಲಿರುವ ಏಷ್ಯಾ ಕಪ್ 2023 ಏಕದಿನ ಕ್ರಿಕೆಟ್ ಟೂರ್ನಿಗೆ ಅರ್ಹತೆ ಪಡೆದಿದೆ.
ಕಿರ್ತಿಪುರದ ತ್ರಿಭುವನ್ ಅಂತಾರಾಷ್ಟ್ರೀಯ ಕ್ರಿಕೆಟ್ ಗ್ರೌಂಡ್ನಲ್ಲಿ ಮಳೆ ಕಾರಣ 2 ದಿನಗಳ ಕಾಲ ನಡೆಸಲಾದ ಫೈನಲ್ ಪಂದ್ಯದಲ್ಲಿ ಅಧಿಕಾರಯುತ ಆಟವಾಡಿದ ರೋಹಿತ್ ಪೌದೆಲ್ ಸಾರಥ್ಯದ ನೇಪಾಳ ತಂಡ ಸ್ಮರಣೀಯ ಜಯ ತನ್ನದಾಗಿಸಿಕೊಂಡಿತು. ಇದರೊಂದಿಗೆ ಏಷ್ಯಾ ಕಪ್ 2023 ಟೂರ್ನಿಯ ‘ಎ’ ಗುಂಪಿನಲ್ಲಿ ಟೀಮ್ ಇಂಡಿಯಾ ಮತ್ತು ಪಾಕಿಸ್ತಾನದ ಜೊತೆಗೆ ಸ್ಥಾನ ಪಡೆದುಕೊಂಡಿದೆ. ಏಷ್ಯಾ ಕಪ್ ಟೂರ್ನಿಯಲ್ಲಿ ಈ ಬಾರಿ ನೇಪಾಳ, ಯುಎಇ ಮತ್ತು ಒಮಾನ್ ತಂಡಗಳು ಉದಯೋನ್ಮುಖ ರಾಷ್ಟ್ರಗಳಾಗಿ ಪಾಲ್ಗೊಳ್ಳುತ್ತಿದ್ದು, ಭಾರತ, ಪಾಕಿಸ್ತಾನ, ಶ್ರೀಲಂಕಾ, ಬಾಂಗ್ಲಾದೇಶ ಮತ್ತು ಅಫಘಾನಿಸ್ತಾನ ತಂಡಗಳ ಎದುರು ಪೈಪೋಟಿ ನಡೆಸಲಿವೆ.














































