Venkatesh Maha | KGF 2: ವೆಂಕಟೇಶ್ ಮಹಾ ಅವರು ‘ಕೆಜಿಎಫ್: ಚಾಪ್ಟರ್ 2’ ಚಿತ್ರದ ಬಗ್ಗೆ ನಾಲಿಗೆ ಹರಿಬಿಟ್ಟಿದ್ದಾರೆ. ಆ ವಿಡಿಯೋ ವೈರಲ್ ಆಗಿದ್ದು, ಅನೇಕರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ.
ಕನ್ನಡ ಚಿತ್ರರಂಗಕ್ಕೆ ಹೆಮ್ಮೆ ತಂದ ಸಿನಿಮಾ ‘ಕೆಜಿಎಫ್: ಚಾಪ್ಟರ್ 1’ ಮತ್ತು ‘ಕೆಜಿಎಫ್: ಚಾಪ್ಟರ್ 2’. ಪ್ರಶಾಂತ್ ನೀಲ್ (Prashanth Neel) ನಿರ್ದೇಶನದ ಈ ಚಿತ್ರಗಳು ಮಾಡಿದ ಮೋಡಿ ಅಷ್ಟಿಷ್ಟಲ್ಲ. ಸ್ಯಾಂಡಲ್ವುಡ್ ಬಗ್ಗೆ ಇಡೀ ದೇಶವೇ ಮಾತನಾಡುವಂತೆ ಆಗಿದ್ದು ಈ ಸಿನಿಮಾಗಳಿಂದ. ಕನ್ನಡ ಸಿನಿಪ್ರಿಯರಿಗೆ ಹಾಗೂ ಯಶ್ ಅಭಿಮಾನಿಗಳ ಪಾಲಿಗೆ ಇದು ಹೆಮ್ಮೆಯ ವಿಚಾರ. ಆದರೆ ‘ಕೆಜಿಎಫ್: ಚಾಪ್ಟರ್ 2’ (KGF: Chapter 2) ಚಿತ್ರದ ಬಗ್ಗೆ ತೆಲುಗಿನ ನಿರ್ದೇಶಕ ವೆಂಕಟೇಶ್ ಮಹಾ (Venkatesh Maha) ಕೆಟ್ಟದಾಗಿ ಮಾತನಾಡಿದ್ದಾರೆ. ಕೆಟ್ಟ ಪದಗಳಿಂದ ಕನ್ನಡದ ಸಿನಿಮಾವನ್ನು ಹೀಯಾಳಿಸಿದ್ದಾರೆ. ಈ ಬಗ್ಗೆ ಕನ್ನಡಿಗರು ಮಾತ್ರವಲ್ಲದೇ ಸ್ವತಃ ತೆಲುಗು ಮಂದಿ ಕೂಡ ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ. ಅವರು ಈ ರೀತಿ ಮಾತನಾಡಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಈ ಸಂದರ್ಶದಲ್ಲಿ ನಿರ್ದೇಶಕ ವೆಂಕಟೇಶ್ ಮಹಾ ಅವರು ಸಿನಿಮಾದ ಹೆಸರು ಹೇಳಿಲ್ಲ. ಆದರೆ ಅವರು ವಿವರಿಸಿದ ಕಥೆಯ ಎಳೆ ಕೇಳಿದರೆ ‘ಕೆಜಿಎಫ್’ ಸಿನಿಮಾ ಬಗ್ಗೆಯೇ ಮಾತನಾಡಿರುವುದು ಎಂಬುದು ಸ್ಪಷ್ಟವಾಗುತ್ತದೆ. ಕಥಾನಾಯಕನ ಪಾತ್ರವನ್ನು ಅವರು ಕೆಟ್ಟ ಭಾಷೆಯಲ್ಲಿ ಹೀಯಾಳಿಸಿದ್ದಾರೆ. ಅದೇ ಸಂದರ್ಶನದಲ್ಲಿ ಭಾಗಿಯಾಗಿದ್ದ ಇನ್ನುಳಿದ ನಿರ್ದೇಶಕರು ಕೂಡ ಅವರ ಮಾತು ಕೇಳಿ ಬಿದ್ದು ಬಿದ್ದು ನಕ್ಕಿದ್ದಾರೆ. ಅವರೆಲ್ಲರ ಬಗ್ಗೆಯೂ ನೆಟ್ಟಿಗರು ಗರಂ ಆಗಿದ್ದಾರೆ.
ಸಿನಿಮಾ ಬಗ್ಗೆ ವಿಮರ್ಶೆ ಮಾಡುವ ಸ್ವತಂತ್ರ ಎಲ್ಲರಿಗೂ ಇದೆ. ಆದರೆ ಬಳಸುವ ಭಾಷೆ ಸರಿಯಾಗಿ ಇರಬೇಕು. ಯಾವುದಾದರೂ ತೆಲುಗು ಸಿನಿಮಾ ಬಗ್ಗೆ ಮಾತನಾಡುವಾಗ ವೆಂಕಟೇಶ್ ಮಹಾ ಅವರು ಕೆಟ್ಟ ಪದಗಳನ್ನು ಬಳಸಿದ್ದರೆ ಅದರ ಪರಿಣಾಮ ಏನಾಗುತ್ತಿತ್ತು ಎಂದು ‘ಕೆಜಿಎಫ್’ ಚಿತ್ರದ ಅಭಿಮಾನಿಗಳು ಪ್ರಶ್ನಿಸುತ್ತಿದ್ದಾರೆ.
ವೆಂಕಟೇಶ್ ಮಹಾ ಆಡಿದ ಮಾತುಗಳಿಗೆ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ‘ಕೆಜಿಎಫ್’ ಚಿತ್ರತಂಡದವರು ಈ ಬಗ್ಗೆ ಯಾವ ರೀತಿ ಪ್ರತಿಕ್ರಿಯಿಸಬಹುದು ಎಂಬ ಕೌತುಕ ಮೂಡಿದೆ. ವೆಂಕಟೇಶ್ ಮಹಾ ಕ್ಷಮೆ ಕೇಳಬೇಕು ಎಂದು ನೆಟ್ಟಿಗರು ಪಟ್ಟು ಹಿಡಿದಿದ್ದಾರೆ. ಸದ್ಯ ಪ್ರಶಾಂತ್ ನೀಲ್ ಅವರು ತೆಲುಗು ಚಿತ್ರರಂಗಕ್ಕೆ ಹತ್ತಿರ ಆಗಿದ್ದಾರೆ. ಅಲ್ಲಿನ ಸ್ಟಾರ್ ನಟರ ಜೊತೆ ಸಿನಿಮಾ ಮಾಡುತ್ತಿದ್ದಾರೆ. ಹೀಗಿರುವಾಗ ಓರ್ವ ಟಾಲಿವುಡ್ ನಿರ್ದೇಶಕನಿಂದಲೇ ಅವರ ಚಿತ್ರದ ಬಗ್ಗೆ ಇಂಥ ಮಾತುಗಳು ಕೇಳಿಬಂದಿರುವುದು ಖಂಡನೀಯ ಎಂಬ ಕಮೆಂಟ್ಗಳು ಬರುತ್ತಿವೆ.
ಇಷ್ಟೆಲ್ಲ ಮಾತನಾಡಿರುವ ವೆಂಕಟೇಶ್ ಮಹಾ ಅವರು ಟಾಲಿವುಡ್ನಲ್ಲಿ ಮಾಡಿದ ಸಾಧನೆ ಏನೂ ಇಲ್ಲ. ಕೇವಲ ಎರಡು ಸಿನಿಮಾ ಮಾಡಿರುವ ಅವರು ‘ಕೆಜಿಎಫ್: ಚಾಪ್ಟರ್ 2’ ಚಿತ್ರದ ಬಗ್ಗೆ ನಾಲಿಗೆ ಹರಿಬಿಟ್ಟಿದ್ದಾರೆ.















































